ಭಾನುವಾರ, ಜೂನ್ 11, 2023
ಮಾನ್ಯ ಶ್ರೀ ವೈ.ಎಸ್. Gundappanavaru
www.sallapa.comವೈ. ಎಸ್. ಗುಂಡಪ್ಪ
On the birth anniversary of teacher, writer and creative personality Y S Gundappa
ಮಕ್ಕಳ ಸಾಹಿತ್ಯದಲ್ಲಿ ಮಹತ್ವದ ಸೇವೆ ಸಲ್ಲಿಸಿ, 'ಸಾಹಿತ್ಯ ಕೂಟ' ಸ್ಥಾಪಿಸಿದ ವೈ. ಎಸ್. ಗುಂಡಪ್ಪ ಅವರು 1905 ವರ್ಷದ ಜೂನ್ 12 ರಂದು ಆನೇಕಲ್ನಲ್ಲಿ ಜನಿಸಿದರು. ತಂದೆ ಯಲಹಂಕದ ಸುಬ್ರಹ್ಮಣ್ಣಯ್ಯನವರು, ತಾಯಿ ಗೌರಮ್ಮ ಅವರು.
ಗುಂಡಪ್ಪನವರ ವಿದ್ಯಾಭ್ಯಾಸ ಬೆಂಗಳೂರಿನ ಕೋಟೆ ಶಾಲೆ ಮತ್ತು ಮಲ್ಲೇಶ್ವರಂ ಪ್ರೌಢಶಾಲೆಗಳಲ್ಲಿ ನಡೆದು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆ ಆದರು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗಲೇ ‘ಶ್ರೀ ಚಂಪಕಧಾಮ ಸ್ವಾಮಿ ಸೇವಾ ಸಂಘ’ ಸ್ಥಾಪಿಸಿ ದೇವರನಾಮಗಳನ್ನು ತಾವೇ ರಚಿಸಿ ಬಾಲಕರನ್ನು ದೇವಸ್ಥಾನಗಳಿಗೆ ಕರೆದೊಯ್ದು ಭಜನೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಹೀಗೆ ಬರೆದ ಭಜನೆಗಳನ್ನು ‘ಗಾನರಸಾಯನ’ ಎಂಬ ಹೆಸರಿನಲ್ಲಿ ಪ್ರಕಟಿಸಿದರು (1925).
ಗುಂಡಪ್ಪನವರು ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಸಂಸಾರದ ಜವಾಬ್ದಾರಿ ಹೊರಬೇಕಾಗಿ ಬಂದಿದ್ದರಿಂದ ಪತ್ರಿಕೆಗಳಿಗೆ ಆಗಾಗ್ಗೆ ಲೇಖನಗಳನ್ನು ಬರೆಯುತ್ತಿದ್ದು, ಪ್ರಜಾಮಿತ್ರ ಪತ್ರಿಕೆ ಉಪಸಂಪಾದಕರಾಗಿ ಸೇರಿದರು. ನಂತರ ಹೊಸಕೋಟೆ ತಾಲ್ಲೂಕು ಕಛೇರಿಯಲ್ಲಿ ಉದ್ಯೋಗ ದೊರೆತಿದ್ದರಿಂದ ತಾಲ್ಲೂಕು ಕಛೇರಿ ಸೇರಿದರು. ಅಲ್ಲಿನ ಆಡಳಿತ ನೋಡಲಾರದೆ ಉದ್ಯೋಗ ತ್ಯಜಿಸಿ ಕೋಲಾರದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇರಿ, ನಂತರ ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ಭಡ್ತಿ ದೊರೆತು ಚಿಂತಾಮಣಿ ಶಾಲೆಗೆ ಸೇರಿದರು.
ಚಿಂತಾಮಣಿಯು ಗುಂಡಪ್ಪನವರ ಶಿಕ್ಷಕ ವೃತ್ತಿ ಹಾಗೂ ಸಾಂಸ್ಕೃತಿಕ ಜಗತ್ತಿನ ಕರ್ಮಭೂಮಿಯಾಯಿತು. ಬೆಂಗಳೂರಿನಲ್ಲಿ ಆರ್.ಕಲ್ಯಾಣಮ್ಮನವರು ಸ್ಥಾಪಿಸಿದ ಮಕ್ಕಳ ಕೂಟದಂತೆ ಕೋಲಾರ ಕರ್ನಾಟಕ ಸಂಘ, ಮಕ್ಕಳ ಕೂಟ, ಮಹಿಳಾ ಸೇವಾ ಸಮಾಜಗಳನ್ನು ಸ್ಥಾಪಿಸಿ ಅದರ ಕಾರ್ಯದರ್ಶಿಯಾಗಿದ್ದುದಲ್ಲದೆ ಕಲ್ಯಾಣಮ್ಮನವರ ‘ಸರಸ್ವತಿ’ ಪತ್ರಿಕೆಗೂ ಪದ್ಯಗಳನ್ನು ಬರೆಯತೊಡಗಿದರು. ಇದಲ್ಲದೆ ಚಿತ್ರಗುಪ್ತ, ವಿಶ್ವಕರ್ನಾಟಕ, ಪ್ರಜಾವಾಣಿ, ಪ್ರಜಾಮತ, ಸುಬೋಧ, ಪ್ರಬುದ್ಧ ಕರ್ನಾಟಕ, ನಗುವನಂದ, ವಿದ್ಯಾದಾಯಿನಿ ಮುಂತಾದ ಪತ್ರಿಕೆಗಳಿಗೂ ಬರೆಯತೊಡಗಿದರು.
ಮಕ್ಕಳನ್ನು ಸನ್ಮಾರ್ಗದಲ್ಲಿ ತರುವ ಜವಾಬ್ದಾರಿ ಶಿಕ್ಷಕರಿಗೆ ಸೇರಿದ್ದು ಎಂದು ಬಲವಾಗಿ ನಂಬಿದ್ದ ಗುಂಡಪ್ಪನವರು ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆಗಾಗಿ ಹಲವಾರು ನಾಟಕಗಳನ್ನು ಬರೆದು ವಾರ್ಷಿಕೋತ್ಸವಗಳಲ್ಲಿ ಪ್ರದರ್ಶಿಸತೊಡಗಿದರು. ಅವುಗಳಲ್ಲಿ ಮಗುವಿನ ಮೈಮೆ, ತೋಳರಾಯನ ಸಭೆ, ಅಹಿಂಸಾ ಪರಮೋಧರ್ಮ, ಧ್ರುವ ಬಾಲ, ಗೋಲಿ ಮೈಮೆ, ಬಾಲ ಕಬೀರ, ಕಾಸಿನ ಗಂಟು ಮುಖ್ಯವಾದವುಗಳು. ಇವಲ್ಲದೆ ಬಾಲಕ ಭಂಡಾರ ಎಂಬ ಮಗ್ಗಿ ಪುಸ್ತಕ, ಭ್ರಾತೃ ಭಕ್ತಾಗ್ರಣಿ ಲಕ್ಷ್ಮಣ ಮೂರ್ತಿ ಎಂಬ ಪೌರಾಣಿಕ ಕಾದಂಬರಿಯನ್ನು ಬರೆದರು. ಈ ಕಾದಂಬರಿಯು ಮದರಾಸಿನ ಸೆಕೆಂಡರಿ ಶಾಲೆಗಳಿಗೆ ಪಠ್ಯಪುಸ್ತಕವಾಗಿತ್ತು. ವೃತ್ತಿ ರಂಗ ಭೂಮಿಯಲ್ಲಿ ಖ್ಯಾತರಾಗಿದ್ದ ಸಿ.ಬಿ. ಮಲ್ಲಪ್ಪನವರ ಶ್ರೀ ಚಂದ್ರಮೌಳೇಶ್ವರ ನಾಟಕ ಸಂಸ್ಥೆಗಾಗಿ ‘ಮಮತಾ ಮೋಕ್ಷ’, ‘ವಿಧಿವಿಲಾಸ’, 'ಅದೃಷ್ಟ’ ಮುಂತಾದ ನಾಟಕಗಳನ್ನು ಬರೆದುಕೊಟ್ಟರು.
ಗುಂಡಪ್ಪನವರು ಭಾಮಿನಿ ಷಟ್ಪದಿಯಲ್ಲಿ ‘ಭಗವಾನ್ ಬುದ್ಧ’ ಬರೆದರು. ಇವರ ನೆಚ್ಚಿನ ವಿದ್ಯಾರ್ಥಿಗಳು ಸೇರಿ ‘ಗೆಳೆಯರ ಬಳಗ’ದ ಮೂಲಕ ವೈ.ಎಸ್. ಗುಂಡಪ್ಪನವರ ಆಯ್ದ ಕೃತಿಗಳ ಸಂಕಲನ ‘ಬಂಗಾರದಂಗಾಲು’ ಪ್ರಕಟಿಸಿದರು. ಇದನ್ನು ಪು.ತಿ.ನ. ಬಿಡುಗಡೆಮಾಡಿದರು.
ಗುಂಡಪ್ಪನವರ ಮಹೋನ್ನತ ಸಾಧನೆ ಎಂದರೆ ‘ಸಾಹಿತ್ಯ ಕೂಟ’ದ ಸ್ಥಾಪನೆ. 1948ರಲ್ಲಿ ಸ್ಥಾಪನೆಯಾದ ಈ ಸಾಹಿತ್ಯ ಕೂಟವು ಪ್ರತಿ ಶನಿವಾರದಂದು ತಪ್ಪದೆ ನಡೆದುಬಂದವು. ಕೂಟದಲ್ಲಿ ಪುರಾತನ, ಆಧುನಿಕ ಗ್ರಂಥಗಳ ಕಾವ್ಯ ಪರಿಚಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಜ್ಞಾನ ಪ್ರಸಾರ ಇವು ಮೂಲ ಉದ್ಧೇಶವಾಗಿದ್ದವು. ಈ ಕಾರ್ಯಕ್ರಮಗಳಲ್ಲಿ ನಾಡಿನ ನಾಡಿನ ಗಣ್ಯ ಲೇಖಕರು ಉಪನ್ಯಾಸ ನೀಡಿದ್ದಾರೆ. ಇಂದಿನ ದಿನದಲ್ಲೂ ಅವರ ಮನೆಯಲ್ಲಿ ಸಾಹಿತ್ಯ ಕೂಟದ ಕಾರ್ಯಕ್ರಮಗಳು ನಡೆಯುತ್ತಿವೆ.
ಸದಾಕಾಲ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೇ ತಮ್ಮನ್ನು ತೊಡಗಿಸಿಕೊಂಡಿದ್ದ ಗುಂಡಪ್ಪನವರು 1963ರಲ್ಲಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯನ್ನು ಡಾ. ರಾಧಾಕೃಷ್ಣನ್ ಅವರಿಂದ ಸ್ವೀಕರಿಸಿದರು. 1966ರಲ್ಲಿ ರಾಜ್ಯ ಸರಕಾರವೂ ಗೌರವಿಸಿತು.
ವೈ. ಎಸ್. ಗುಂಡಪ್ಪನವರು 1998ರ ಜೂನ್ 18 ರಂದು ಈ ಲೋಕವನ್ನಗಲಿದರು.
(ನಮ್ಮ ಕನ್ನಡ ಸಂಪದ Kannada Sampada ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ. ನಮಸ್ಕಾರ)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)